ಅಟ್ಲಾಂಟಿಕ್ ಸಾಗರ
	
ಭೂಮಿಯ ವಿಸ್ತೀರ್ಣದಲ್ಲಿ 20% ಪ್ರದೇಶವನ್ನು ಆವರಿಸಿದೆ. ದೊಡ್ಡ ಮಹಾಸಾಗರಗಳಲ್ಲಿ ಎರಡನೆಯದು. ಇದು ಉತ್ತರದಲ್ಲಿ ಗ್ರೀನ್‍ಲೆಂಡ್ ಐಸ್‍ಲೆಂಡ್ ಪ್ರದೇಶದಿಂದ ದಕ್ಷಿಣದಲ್ಲಿ ಬೋವೆಲ್ ದ್ವೀಪದವರೆಗೆ ವ್ಯಾಪಿಸಿದೆ. ಪೂರ್ವಕ್ಕೆ ಯೂರೋಪು, ಆಫ್ರಿಕ ಖಂಡಗಳು, ಪಶ್ಚಿಮಕ್ಕೆ ಉತ್ತರ, ದಕ್ಷಿಣ ಅಮೆರಿಕ ಖಂಡಗಳೂ ಇವೆ. ವಿಸ್ತೀರ್ಣ 3,18,39,306 ಚ.ಮೈ. ಈ ಸಾಗರಕ್ಕೆ ಸೇರಿದ ಅನೇಕ ಸಮುದ್ರಗಳೊಡನೆ ಇದರ ಒಟ್ಟು ವಿಸ್ತೀರ್ಣ ಸುಮಾರು 42 ದಶಲಕ್ಷ ಚ.ಮೈ. ಗಳು. ಮೆಕ್ಸಿಕೋ ಆಖಾತ, ಉತ್ತರ ಸಮುದ್ರ, ಬಾಲ್ಟಿಕ್ ಸಮುದ್ರ, ಮೆಡಿಟರೇನಿಯನ್ ಸಮುದ್ರ, ಕೆರಿಬಿಯನ್ ಸಮುದ್ರ, ಸ್ಕಾಷಿಯಾ ಸಮುದ್ರ ಮುಂತಾದವು ಈ ಸಾಗರದ ಶಾಖೆಗಳು. ಇದಕ್ಕಲ್ಲದೆ ಬೇರಾವ ಸಾಗರಕ್ಕೂ ಅಷ್ಟೊಂದು ದೊಡ್ಡ ನದಿಗಳು ಬಂದು ಸೇರುವುದಿಲ್ಲ. ಈ ಸಾಗರದ ಮೂಲಕ ಸಮಭಾಜಕವೃತ್ತ ಹಾದು ಹೋಗುವುದರಿಂದ, ಇದನ್ನು ಉತ್ತರ ಅಟ್ಲಾಂಟಿಕ್ ಮತ್ತು ದಕ್ಷಿಣ ಅಟ್ಲಾಂಟಿಕ್ ಎಂದು ವಿಭಾಗಿಸಲಾಗಿದೆ. 
	
ಅಟ್ಲಾಂಟಿಕ್ ಸಾಗರದ ಸರಾಸರಿ ಆಳ 2 ಮೈ. ದಕ್ಷಿಣ ಅಟ್ಲಾಂಟಿಕ್ ಸಾಗರ ಹೆಚ್ಚು ಆಳವಾಗಿದೆ. ಉತ್ತರ ಅಟ್ಲಾಂಟಿಕ್ ಸಾಗರದಲ್ಲಿ ಖಂಡಾವರಣ ಪ್ರದೇಶ ಹೆಚ್ಚಾಗಿರುವುದರಿಂದ ಆಳ ಕಡಿಮೆ. ಅಟ್ಲಾಂಟಿಕ್ ಸಾಗರದ ಮಧ್ಯದಲ್ಲಿ ಐಸ್‍ಲೆಂಡ್‍ನಿಂದ ದಕ್ಷಿಣದಲ್ಲಿರುವ ಬೊವೆಟ್ ದ್ವೀಪದವರೆಗೆ ಹಾವಿನಾಕಾರದ ಮಧ್ಯ ಅಟ್ಲಾಂಟಿಕ್ ಶ್ರೇಣಿ ಎಂಬ ಜಲಾಂತರ್ಗತ ಪರ್ವತದ ಸಾಲು ಇದೆ. ಇದರ ಮೇಲೆ ಸುಮಾರು 9000' ನೀರಿದೆ. ಸಮಭಾಜಕವೃತ್ತ ಹಾದುಹೋಗುವ ಭಾಗದಲ್ಲಿ ರೊಮಾಚ್ ಫೆರ್ರೊ ಎಂಬ ಕಣಿವೆಯುಂಟು. ಇದರ ಆಳ 15000' ಉತ್ತರಕ್ಕಿರುವ ಶ್ರೇಣಿಯ ಭಾಗಕ್ಕೆ ಡಾಲ್ಫಿನ್ ಶ್ರೇಣಿ ಎಂದೂ, ದಕ್ಷಿಣದ ಶ್ರೇಣಿಗೆ ಛಾಲೆಂಜರ್ ಶ್ರೇಣಿಯೆಂದೂ ಹೆಸರು. ಈ ಮಧ್ಯಶ್ರೇಣಿಯ ಮುಳುಗದಿರುವ ಭಾಗ ಅeóÉೂೀರ್ಸ್, ಸೇಂಟ್ ಪಾಲ್, ಅಸೆನ್ಷಿಯನ್, ಸೇಂಟ್ ಹೆಲಿನಾ, ಟ್ರಿಪ್ಟಾನ್ ಡ ಕೂನ್ಯಾ, ಗಾಫ್, ಬೋವೆಟ್ ಮುಂತಾದ ದ್ವೀಪಗಳಂತೆ ಕಾಣುವುದು. ಈ ಶ್ರೇಣಿಯಿಂದ ಪೂರ್ವಕ್ಕೂ ಪಶ್ಚಿಮಕ್ಕೂ ಕೆಲವು ಶ್ರೇಣಿಗಳ ಶಾಖೆಗಳಿವೆ.  ವಾಲ್ವಿಸ್ ರಿಡ್ಜ್ ಎಂಬುದು ಪೂರ್ವದ ಕಡೆಗೆ 200 ದ. ಅಕ್ಷಾಂಶದ ಭಾಗದಲ್ಲಿ ಆಫ್ರಿಕದತ್ತ ಹಬ್ಬಿದೆ. ರಯೋಗ್ರ್ಯಾಂಡ್ ರೈಜ್ ಎಂಬುದು ಪಶ್ಚಿಮದಲ್ಲಿ ದಕ್ಷಿಣ ಅಮೆರಿಕದ ಕಡೆಗೆ 300 ದ. ಅಕ್ಷಾಂಶದವರೆಗೆ ಹಬ್ಬಿದೆ. ಉತ್ತರ ಅಟ್ಲಾಂಟಿಕ್ ಸಾಗರದಲ್ಲಿ ವೈವಿಲೆ ಥಾಮ್ಸನ್ ರಿಡ್ಜ್ ಮತ್ತು ಸೇಂಟ್ ವಿನ್ಸೆಂಟ್ ರೈeóï ಎಂಬ ಶ್ರೇಣಿಗಳು ಪೂರ್ವದ ಕಡೆಗೆ ಹಬ್ಬಿವೆ. ಈ ಎಲ್ಲ ಶ್ರೇಣಿಗಳೂ ಈ ಸಾಗರವನ್ನು ಬ್ರೆಜಿûಲ್, ಅರ್ಜೆಂಟೀನ, ಅಂಗೋಲ, ಕೇಪ್ ದ್ರೋಣಿಗಳೆಂದೂ ಉತ್ತರ ಅಮೆರಿಕದ ಹತ್ತಿರದ ಕೇಪ್ ವರ್ಡೆ ದ್ರೋಣಿ, ಗಿನಿಯಾ ದ್ರೋಣಿಗಳೆಂದೂ ವಿಭಾಗಿಸಿದ್ದಾರೆ. ವೆಸ್ಟ್‍ಇಂಡೀಸ್ ದ್ವೀಪಗಳಿರುವ ಕೆರಿಬ್ಬಿಯನ್ ಸಮುದ್ರ ಅಟ್ಲಾಂಟಿಕ್ ಸಾಗರದ ಉಪಸಮುದ್ರ. 
	
ಉತ್ತರ ಅಟ್ಲಾಂಟಿಕ್ ಸಾಗರದಲ್ಲಿ 1,000 ಮೈ. ಅಗಲವುಳ್ಳ ಕೇವಲ ಆಳದಲ್ಲಿರುವ ವಿಶಾಲವಾದ ಟೆಲಿಗ್ರಾಫ್ ಜಲಾಂತರ ಪ್ರಸ್ಥಭೂಮಿಯಿದೆ. ಇದು ಉತ್ತರ ಬ್ರಿಟನ್ನಿನಿಂದ ಗ್ರೀನ್‍ಲೆಂಡ್ ಮತ್ತು ಲ್ಯಾಬ್ರಡಾರ್ ಪ್ರದೇಶಗಳವರೆಗೆ ಹಬ್ಬಿದೆ. ಈ ಸಾಗರದಲ್ಲಿ ಪೋರ್ಟೋರಿಕೋ (30,245') ದಕ್ಷಿಣ ಸ್ಯಾಂಡ್‍ವಿಚ್ (27,113') ನಾರೆಪ್ (22,950') ಎಂಬ ಆಳವಾದ ಕೂಪ ಭಾಗಗಳಿವೆ (ಡೀಪ್ಸ್).
	
ಈ ಸಾಗರದಲ್ಲಿ ಪಶ್ಚಿಮ ಯೂರೋಪ್, ಉತ್ತರ ಅಮೆರಿಕದ ಈಶಾನ್ಯಭಾಗ, ಮೆಕ್ಸಿಕೋ ಕೊಲ್ಲಿ-ಈ ಭಾಗಗಳು ವಿಶಾಲವಾದ ಖಂಡಾವರಣ ಪ್ರದೇಶಗಳು. 
	
ಅಟ್ಲಾಂಟಿಕ್ ಸಾಗರದಲ್ಲಿ ಗಿನಿ ಆಖಾತದಿಂದ ಮೆಕ್ಸಿಕೋ ಆಖಾತದ ವರೆಗಿರುವ ಪ್ರದೇಶದಲ್ಲಿ ಅಧಿಕ ಉಷ್ಣತೆ ಇದೆ. ಉತ್ತರದಲ್ಲಿ ಗ್ರೀನ್‍ಲೆಂಡಿನ ಹತ್ತಿರವೂ 400 ದ ಅಕ್ಷಾಂಶದ ದಕ್ಷಿಣ ಭಾಗದಲ್ಲೂ ಅತಿ ಶೀತಭಾಗಗಳಿವೆ. ಈ ಸಾಗರದಲ್ಲಿ ಸಮಭಾಜಕವೃತ್ತಪ್ರದೇಶದಲ್ಲಿರುವ ಸಾರ್ಗಾಸೋ ಸಮುದ್ರವೆಂಬ ಭಾಗದಲ್ಲಿ ಸಮುದ್ರಪಾಚಿ ಮುಂತಾದ ಸಸ್ಯಗಳು ಹೆಚ್ಚಾಗಿ ಕಂಡುಬರುತ್ತವೆ. ವಾಯುವ್ಯಭಾಗದಲ್ಲಿ ದಟ್ಟವಾದ ಮಂಜು ಕವಿದಿರುವುದು ಇನ್ನೊಂದು ವಿಶೇಷ ಅಂಶ. 

ಉತ್ತರ ಅಟ್ಲಾಂಟಿಕ್ ಸಾಗರದಲ್ಲಿ ಗಿನಿ ಪ್ರವಾಹ, ಗಯಾನಾಪ್ರವಾಹ, ಫ್ಲಾರಿಡಾ ಗಲ್ಫ್‍ಸ್ಟ್ರೀಮ್, ಉತ್ತರ ಅಟ್ಲಾಂಟಿಕ್ ಪ್ರವಾಹ, ಕ್ಯಾನರೀಸ್ ಪ್ರವಾಹಗಳೂ ಗ್ರೀನ್‍ಲೆಂಡ್ ಮತ್ತು ಲ್ಯಾಬ್ರಡಾರ್ ಪ್ರವಾಹಗಳೂ ಕಂಡುಬರುವುವು. ದಕ್ಷಿಣ ಅಟ್ಲಾಂಟಿಕ್ ಸಾಗರದಲ್ಲಿ ಬ್ರೆಜಿûಲ್ ಪ್ರವಾಹ, ದಕ್ಷಿಣ ಪ್ರವಾಹ, ಬೆಂಗ್ವೆಲ್ಲಾ ಪ್ರವಾಹಗಳು ಅಪ್ರದಕ್ಷಿಣೆಯಾಗಿ ಹರಿಯುವುವು. ಸಮಭಾಜಕವೃತ್ತದ ಭಾಗದಲ್ಲಿ ಒಂದು ಪ್ರತಿ ಪ್ರವಾಹ ಪೂರ್ವದ ಕಡೆಗೆ ಚಲಿಸುತ್ತದೆ. ಉತ್ತರ ಅಟ್ಲಾಂಟಿಕ್ ಸಾಗರದಲ್ಲಿ ಆಗಾಗ್ಗೆ ಆವರ್ತಮಾರುತಗಳುಂಟಾಗಿ ಬಿರುಗಾಳಿಗಳುಂಟಾಗುತ್ತವೆ. ದಕ್ಷಿಣ ಅಟ್ಲಾಂಟಿಕ್ ಸಾಗರದಲ್ಲಿ 400 ದ. ಅಕ್ಷಾಂಶದ ಭಾಗದಲ್ಲಿ ಮಾತ್ರ ಬಿರುಗಾಳಿಗಳು ಬೀಸುವುವು. 
	
ಅಟ್ಲಾಂಟಿಕ್ ಸಾಗರದಲ್ಲಿರುವ ಗ್ರ್ಯಾಂಡ್ ಬ್ಯಾಂಕ್ಸ್, ಬಹಾಮಾ ಬ್ಯಾಂಕ್ಸ್, ಜಾಜ್ ಬ್ಯಾಂಕ್ಸ್, ಸ್ಕಾಷಿಯಾ ಪ್ರದೇಶ, ಐರಿಷ್ ಸಮುದ್ರ, ಉತ್ತರ ಸಮುದ್ರ, ದಕ್ಷಿಣ ಆಫ್ರಿಕದ ನೈರುತ್ಯಭಾಗ-ಇವು ಮೀನುಗಾರಿಕೆಯ ಮುಖ್ಯ ಜಲಪ್ರದೇಶಗಳು. ಈ ಸಾಗರ ಪ್ರಪಂಚದ ಮುಖ್ಯ ವಾಣಿಜ್ಯ ಹೆದ್ದಾರಿಯಾಗಿವೆ.								  
 (ಎ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ